ರಂಗೇಗೌಡ ಆರ್
(1880 - ್147). ಹಿಂದಿನ ಮೈಸೂರು ಸಂಸ್ಥಾನದಲ್ಲಿ ವಿದ್ಯಾಭ್ಯಾಸವನ್ನೇ ಕಂಡಿರದ ಆದಿಕರ್ನಾಟಕರಿಗೆ, ವಿದ್ಯಾಭ್ಯಾಸಕ್ಕೆ ತಳಹದಿ ಹಾಕಿ ಅದನ್ನು ದೃಢವಾಗಿ ಬೆಳೆಸುವ ಕಾರ್ಯದಲ್ಲಿ ತಲಕಾಡು ಆರ್.ರಂಗೇಗೌಡರ ಪಾತ್ರ ಪ್ರಮುಖವಾದದ್ದು.

ಸಮಾಜದಲ್ಲಿ ತೀವ್ರವಾಗಿದ್ದ ಅಸ್ಪøಶ್ಯತೆಯ ಆಚರಣೆಯಿಂದಾಗಿ ಇಪ್ಪತ್ತನೇ ಶತಮಾನದ ಆದಿಯವರೆಗೂ ಮೈಸೂರು ಸಂಸ್ಥಾನದ ಶಾಲೆಗಳಲ್ಲಿ ಆದಿಕರ್ನಾಟಕರ ಮಕ್ಕಳಿಗೆ ಪ್ರವೇಶಕ್ಕೆ ಆಸ್ಪದವೇ ಇರಲಿಲ್ಲ. ಹೀಗಾಗಿ ಅವರು ವಿದ್ಯಾಭ್ಯಾಸದಿಂದ ಸಂಪೂರ್ಣವಾಗಿ ವಂಚಿತರಾಗಿದ್ದರು. ಈ ಪರಿಸ್ಥಿತಿಯನ್ನು ನಿವಾರಿಸಲು ಮಹಾರಾಜರ ಸರ್ಕಾರವು ಸಂಸ್ಥಾನದಲ್ಲಿ ಪ್ರಥಮವಾಗಿ ಆದಿಕರ್ನಾಟಕ ವಿದ್ಯಾರ್ಥಿಗಳಿಗಾಗಿಯೇ ಮೀಸಲಾದ ಒಂದು ಶಾಲೆಯನ್ನು 1900 ನೆಯ ಇಸವಿಯಲ್ಲಿ ಇಂದಿನ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪ್ರಾರಂಭಿಸಿದರು. ಇದರಿಂದ ಆದಿಕರ್ನಾಟಕರಿಗೆ ಅತ್ಯಂತ ಸಂತೋಷವಾದರೂ ಮತ್ತೊಂದು ಸಮಸ್ಯೆ ಎದುರಾಯಿತು. ಆದಿಕರ್ನಾಟಕರಲ್ಲಿ ವಿದ್ಯಾವಂತರು ಇಲ್ಲದಿದ್ದುದರಿಂದ ಈ ಶಾಲೆಯಲ್ಲಿಉಪಾಧ್ಯಾಯರಾಗಿ ಕೆಲಸ ಮಾಡಲು ಮೇಲು ಜಾತಿಯವರನ್ನೇ ಅವಲಂಬಿಸಬೇಕಾಗಿತ್ತು. ಆದರೆ ಹಲವರು ಈ ಕೆಲಸವನ್ನು ಮಾಡಲು ನಿರಾಕರಿಸಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ತಲಕಾಡು ಗ್ರಾಮದ ಶ್ರೀ.ಆರ್. ರಂಗೇಗೌಡರು, ಸಮಾಜದ ಅವಕೃಪೆಯನ್ನು ಗಣನೆಗೆ ತೆಗೆದುಕೊಳ್ಳದೆ, ಸ್ವಇಚ್ಛೆಯಿಂದ ಮುಂದೆ ಬಂದು ಆ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿಯನ್ನು ಒಪ್ಪಿಕೊಂಡರು. ಇದರಿಂದ ಆದಿಕರ್ನಾಟಕರಿಗೆ ಬಹಳ ಸಂತೋಷವಾಗಿ, ಆಗಿನಿಂದಲೇ ಅವರು ರಂಗೇಗೌಡರ ಬಗ್ಗೆ ವಿಶೇಷವಾದ ಗೌರವ ಬೆಳೆಸಿಕೊಂಡರು. ರಂಗೇಗೌಡರು ಬಹಳ ವಾತ್ಸಲ್ಯದಿಂದ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರ ಜೊತೆಗೆ ಸ್ವಚ್ಛತೆಯ ಬಗ್ಗೆಯೂ ಮನವರಿಕೆ ಮಾಡಿಕೊಡುತ್ತಿದ್ದರು. ಆದಿಕರ್ನಾಟಕ ಬಾಲಕರಿಗೆ ವಿದ್ಯಾ ಗ್ರಹಣ ಶಕ್ತಿ ಇಲ್ಲವೆಂಬ ತಪ್ಪು ಭಾವನೆಯನ್ನು ನಿವಾರಿಸಿ ಆ ಶಾಲೆಯಲ್ಲಿ ಕಲಿತ ಮಕ್ಕಳು ಪ್ರತಿ ವರ್ಷವೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ದೇಶೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಂತೆ ಮಾಡಿದರು, ತೇರ್ಗಡೆ ಹೊಂದಿದ ಆಸಕ್ತ ತರುಣರಿಗೆ ತಮ್ಮ ವರ್ಚಸ್ಸು ಉಪಯೋಗಿಸಿ ಉಪಾಧ್ಯಾಯ ನೌಕರಿಗಳನ್ನು ಮಾಡಿಸಿ ಕೊಡುತ್ತಿದ್ದರು.

ರಾಜ್ಯದ ಎಲ್ಲಾ ಕಡೆಯ ಆದಿಕರ್ನಾಟಕ ಬಾಲಕರಿಗೆ ವಿದ್ಯಾಭ್ಯಾಸದ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ 1913ರಲ್ಲಿ ಸರ್ಕಾರದವರು ಮೈಸೂರಿನಲ್ಲಿ "ಪಂಚಮಾ ಬೋರ್ಡಿಂಗ್ ಹೋಮ್" ಎಂಬ ವಸತಿ ಶಾಲೆಯನ್ನು ಸ್ಥಾಪಿಸುವ ತೀರ್ಮಾನ ಮಾಡಿದರು. ಅದನ್ನು ಅಭಿವೃದ್ಧಿಪಡಿಸಿ ನಡೆಸಲು ರಂಗೇಗೌಡರೇ ಸಮರ್ಥರೆಂದು ತಿಳಿದು, ಅವರಿಗೆ ಎಲ್ಲಾ ಅಧಿಕಾರವನ್ನು ಕೊಟ್ಟು ಅವರನ್ನು ಮುಖ್ಯೋಪಾಧ್ಯಾಯರನ್ನಾಗಿ ಅಲ್ಲಿಗೆ ನೇಮಿಸಿದರು. ಅದನ್ನು 30 ವಿದ್ಯಾರ್ಥಿಗಳಿಂದ ಪ್ರಾರಂಭಿಸಿ ಅಂತಿಮವಾಗಿ 225ಕ್ಕೆ ಹೆಚ್ಚಿಸುವುದರಲ್ಲಿ ರಂಗೇಗೌಡರ ಪಾತ್ರ ಮಹತ್ತರವಾದುದು. ಈ ಶಾಲೆಯಲ್ಲಿಯೂ ರಂಗೇಗೌಡರು ನಿಷ್ಠ, ದಕ್ಷತೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ತಮ್ಮೆಲ್ಲ ಸಾಮಥ್ರ್ಯವನ್ನೂ ವಿನಿಯೋಗಿಸಿ ಆದಿಕರ್ನಾಟಕ ವಿದ್ಯಾರ್ಥಿಗಳು ತಾವು ಇತರರಿಗೆ ಕಡಿಮೆ ಇಲ್ಲದಂತೆ ತಮ್ಮ ಪ್ರತಿಭೆಯನ್ನು ತೋರಿಸಬಲ್ಲರೆಂಬುದನ್ನು ಸಾದರಪಡಿಸಿದರು. ಈ ಶಾಲೆಯಲ್ಲಿ ತೇರ್ಗಡೆ ಹೊಂದಿದವರನ್ನು ಉನ್ನತ ವಿದ್ಯಾಭ್ಯಾಸಕ್ಕೆ ಹೋಗಲು ಪ್ರೇರೇಪಿಸುತ್ತಿದ್ದರು. 
ರಂಗೇಗೌಡರಿಗೆ ಚಿಕ್ಕಂದಿನಿಂದಲೂ ಆಧ್ಯಾತ್ಮ ಕ್ಷೇತ್ರದಲ್ಲಿ ಆಳವಾದ ಆಸಕ್ತಿ ಇತ್ತು. 1915ರ ಸುಮಾರಿನಲ್ಲಿ ಹಿರೋಡೆ ಎಂದು ಕರೆಯಲ್ಪಡುತ್ತಿದ್ದ, ಇಂದಿನ ಪಾಂಡವಪುರದ ಹತ್ತಿರದ ಕುಂತಿ ಬೆಟ್ಟದಲ್ಲಿ ತಮಿಳುನಾಡಿನಿಂದ ಬಂದು ನೆಲೆಸಿದ್ದ ಅದ್ವೈತ ತತ್ತ್ವಪ್ರತಿಪಾದಕ ಸ್ವಾಮಿ ಶ್ರೀ ಶಂಕರಾನಂದ ಭಾರತಿ ಎಂಬ ಸನ್ಯಾಸಿ, ಭಗವದ್ಗೀತೆಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಅವರ ಪ್ರಭಾವಕ್ಕೆ ಒಳಗಾದ ರಂಗೇಗೌಡರು ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳನ್ನೂ ಬಾಯಿ ಪಾಠ ಮಾಡಿ ಅವರಿಗೆ ಒಪ್ಪಿಸಿ ಅರ್ಹತಾ ಪತ್ರ ಪಡೆದಿದ್ದರು. ಇದಲ್ಲದೆ ತಲಕಾಡಿನಲ್ಲಿ ತೊರವೆ ರಾಮಾಯಣ ಮತ್ತು ಕುಮಾರವ್ಯಾಸನ ಮಹಾಭಾರತಗಳನ್ನು ಗಮಕಿಗಳಿಂದ ಓದಿಸಿ ತಾವು ವ್ಯಾಖ್ಯಾನ ಮಾಡುತ್ತಿದ್ದರು.

ಹೀಗೆ ಆಧ್ಯಾತ್ಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ರಂಗೇಗೌಡರು ವಿದ್ಯಾರ್ಥಿಗಳಲ್ಲೂ ಧಾರ್ಮಿಕ ಭಾವನೆ ಮತ್ತು ನೈತಿಕ ಮಟ್ಟ ಹೆಚ್ಚಿಸಲು ನಿಗದಿತ ಪಾಠ ಪ್ರವಚನಗಳ ಬೋಧನೆಯ ಜೊತೆಗೆ, ಪುರಾಣ ಪುಣ್ಯ ಕಥೆಗಳನ್ನು ಬೋಧಿಸಿ, ಅವರಲ್ಲಿ ಸಾಂಸ್ಕøತಿಕ ಉನ್ನತಿಯನ್ನು ಬೆಳೆಸುವ ಕೆಲಸವನ್ನೂ ಮಾಡಿದರು. ಶಾಲೆಯ ಹತ್ತಿರದಲ್ಲೇ ವಾಸಿಸುತ್ತಿದ್ದ ರಂಗೇಗೌಡರು ಬೆಳಗಿನಿಂದ ಪ್ರಾರಂಭಿಸಿದರೆ, ರಾತ್ರಿ ಬಹಳ ಹೊತ್ತಿನವರೆಗೂ ವಿದ್ಯಾರ್ಥಿಗಳ ಮಧ್ಯೆ ತಮ್ಮ ಸಮಯವನ್ನು ಉಪಯುಕ್ತವಾಗಿ ವಿನಿಯೋಗಿಸುತ್ತಿದ್ದರು.

1935 ನೆಯ ಇಸವಿಯಲ್ಲಿ ನಿವೃತ್ತರಾಗ ಬೇಕಾಗಿದ್ದ ರಂಗೇಗೌಡರಿಗೆ ಅವರ ನಿಷ್ಠಾವಂತ ಮತ್ತು ದಕ್ಷ ಸೇವೆಯನ್ನು ಗುರುತಿಸಿ ಸರ್ಕಾರದವರು ಅವರ ಸೇವೆಯನ್ನು ಎರಡು ವರ್ಷಗಳ ಕಾಲ ವಿಸ್ತøತಗೊಳಿಸಿದರು. 1937ರಲ್ಲಿ ರಂಗೇಗೌಡರು ನಿವೃತ್ತರಾದಾಗ ಆದಿಕರ್ನಾಟಕರನ್ನು ವಿದ್ಯಾವಂತರಾಗಿ ಮಾಡಲು ಮೂವತ್ತೇಳು ವರ್ಷ ಕಾಲ ನಿರಂತರವಾಗಿ ಸಲ್ಲಿಸಿದ ಇವರ ಸೇವೆಯಿಂದ ಪ್ರಭಾವಿತರಾದ ಆದಿಕರ್ನಾಟಕ ಜನಾಂಗದ ಇವರ ಶಿಷ್ಯ ವರ್ಗದವರು ಅತ್ಯಂತ ಕೃತಜ್ಞತಾ ಭಾವದಿಂದ ಇವರನ್ನು "ಆದಿ ಕರ್ನಾಟಕರ ಪ್ರಥಮ ವಿದ್ಯಾ ಗುರುಗಳು" ಎಂದು ಘೋಷಿಸಿ ತಮ್ಮ ಗೌರವವನ್ನು ತೋರಿಸಿದರು.

ಶ್ರೀ. ರಂಗೇಗೌಡರು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದಲ್ಲಿ 1880 ರಲ್ಲಿ, ರೈತ ಕುಟುಂಬದ ಶ್ರೀ. ರಂಗೇಗೌಡ ಮತ್ತು ಶ್ರೀಮತಿ ಲಕ್ಷ್ಮಮ್ಮ ಅವರ ನಾಲ್ಕನೆಯ ಪುತ್ರರಾಗಿ ಜನಿಸಿದರು. ತಲಕಾಡಿನಲ್ಲಿಯೇ ಅಪ್ಪರ್ ಪ್ರೈಮರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ನಂತರ ಮಳವಳ್ಳಿಯಲ್ಲಿ ಉಪಾಧ್ಯಾಯ ವೃತ್ತಿ ಕೈಗೊಂಡರು. ನಿವೃತ್ತರಾದ ಮೇಲೆ ತಲಕಾಡಿನಲ್ಲೇ ನೆಲೆಸಿದ ಇವರು 1947 ರಲ್ಲಿ ನಿಧನರಾದರು.
(ಟಿ.ಆರ್.ಕೃಷ್ಣೇಗೌಡ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ